ಸಮುದ್ರದ ಅಲೆಗೆ ಕೊಚ್ಚಿಹೋಗುತ್ತಿದ್ದ ಸಹೋದರನ ಪುತ್ರಿಯನ್ನು ರಕ್ಷಿಸಲು ಹೋಗಿ ವ್ಯಕ್ತಿ ಮೃತ್ಯು

ಉಳ್ಳಾಲ : ಸಮುದ್ರ ಪಾಲಾಗುತ್ತಿದ್ದ ಸಹೋದರನ ಪುತ್ರಿಯನ್ನು ರಕ್ಷಿಸಿ ದಡಕ್ಕೆ ಕರೆತಂದ ವ್ಯಕ್ತಿಯೊಬ್ಬರು ದೈತ್ಯ ಅಲೆಯ ಹೊಡೆತದಿಂದ ಮೃತಪಟ್ಟ ಘಟನೆ ಸೋಮೇಶ್ವರ ಉಚ್ಚಿಲದ ಪೆರಿಬೈಲು ಎಂಬಲ್ಲಿ ಭಾನುವಾರ ನಡೆದಿದೆ.

ಬೆಂಗಳೂರಿನ ಶಿವಾಜಿ ನಗರದ ಶಿವಾಜಿ ರೋಡ್ ನಿವಾಸಿ ಕೆ.ಎಂ.ಸಜ್ಜದ್ ಅಲಿ (45)ಮೃತಪಟ್ಡ ವ್ಯಕ್ತಿ.

ಸಜ್ಜದ್‌‌ ಅವರು ಮಂಗಳೂರಿನ ಅಡ್ಯಾ‌ರ್ ಗಾರ್ಡನ್‌ನಲ್ಲಿ ನಡೆದಿದ್ದ ಸಂಬಂಧಿಕರ ಮದುವೆ ಸಮಾರಂಭಕ್ಕೆ ಬಂದಿದ್ದರು. ಮದುವೆ ಮುಗಿಸಿ ಸಜ್ಜದ್ ಅವರ ಪತ್ನಿ ಅಲಿಮಾ ರಶೀದಾ ಮಂಗಳೂರಿನ ಪಡೀಲಿನಲ್ಲಿರುವ ತಾಯಿ ಮನೆಗೆ ತೆರಳಿದ್ದರು. ರವಿವಾರ ಸಜ್ಜದ್‌ ಅಲಿರವರು ಒಟ್ಟು 11ಮಂದಿ ಕುಟಂಬಸ್ಥರೊಂದಿಗೆ ಸೋಮೇಶ್ವರದ ಉಚ್ಚಿಲ ಪೆರಿಬೈಲು ಬೀಚಿಗೆ ಬಂದಿದ್ದರು.

ಬೀಚ್‌ನಲ್ಲಿ ನೀರಾಟವಾಡುತ್ತಿದ್ದಾಗ ಸಜ್ಜದ್ ಅವರ ಸಹೋದರನ ಪುತ್ರಿ ಉಮೈ ಆಸಿಯಾ ಎಂಬಾಕೆ ಸಮುದ್ರದ ಅಲೆಯಲ್ಲಿ ಕೊಚ್ಚಿಕೊಂಡು ಸ್ವಲ್ಪ ದೂರಕ್ಕೆ ಹೋಗಿ, ಪ್ರಾಣ ರಕ್ಷಣೆಗೆ ಬೊಬ್ಬಿಟ್ಟಿದ್ದಾಳೆ. ತಕ್ಷಣ ಸಜ್ಜದ್‌ ಅಲಿಯವರು ಸಮುದ್ರಕ್ಕೆ ಧುಮುಕಿ ಆಸಿಯಾಳನ್ನು ಎಳೆದು ತಂದು ದಡಕ್ಕೆ ಹಾಕಿದ್ದಾರೆ. ಅದೇ ಸಂದರ್ಭ ತೀರಕ್ಕೆ ಅಪ್ಪಳಿಸಿದ ದೈತ್ಯಾಕಾರದ ಮತ್ತೊಂದು ಅಲೆಯೊಂದು ಸಜ್ಜದ್ ಅವರನ್ನು ಸಮುದ್ರದತ್ತ ಎಳೆದೊಯ್ದಿದೆ. ಅದರ ಬೆನ್ನಲ್ಲೇ ಮತ್ತೆ ಬಂದ ಸಮುದ್ರದ ಅಲೆಯಲ್ಲಿ ಸಜ್ಜದ್ ನೇರವಾಗಿ ತೀರಕ್ಕೆ ಬಂದು ಬಿದ್ದಿದ್ದಾರೆ.

ಅಲೆಯಲ್ಲಿ ಬಂದು ದಡಕ್ಕೆ ಅಪ್ಪಳಿಸಿದ ರೀತಿ ಬಿದ್ದಿದ್ದರಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತೆನ್ನಲಾಗಿದೆ. ಜೀವನ್ಮರಣ ಸ್ಥಿತಿಯಲ್ಲಿದ್ದ ಸಜ್ಜದ್ ಅವರನ್ನ ಆಸ್ಪತ್ರೆಗೆ ಒಯ್ಯುತ್ತಿದ್ದ ದಾರಿ ಮಧ್ಯದ ಸಂಕೊಲಿಗೆ ಎಂಬಲ್ಲಿ ರೈಲ್ವೇ ಗೇಟ್ ಹಾಕಿದ್ದ ಕಾರಣ ಆಸ್ಪತ್ರೆ ಸೇರಲು ವಿಳಂಬವಾಗಿದೆ ಎನ್ನಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Related posts

ಝೀರೋ ಟ್ರಾಫಿಕ್‌ನಲ್ಲಿ ಮಗು ಬೆಂಗಳೂರು ಆಸ್ಪತ್ರೆಗೆ ರವಾನೆ : ಈಶ್ವರ ಮಲ್ಪೆ ನೆರವು

ಆಟೋ ಚಾಲಕ ನೇಣಿಗೆ ಶರಣು

ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳ ಜಾಮೀನಿಗೆ ಶ್ಯೂರಿಟಿದಾರನಾಗಿ ವಂಚನೆ – ಆರೋಪಿ ಅಂದರ್