ಗೋವಾ ಮೀನುಗಾರಿಕೆ ಸಚಿವರಾದ ಶ್ರೀ ನೀಲಕಂಠ ಹಲರ್ನ್ಕರ್‌ರವರನ್ನು ಭೇಟಿ ಮಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದ ಮಲ್ಪೆ ಮೀನುಗಾರ ಸಂಘದ ನಿಯೋಗ

ಕರಾವಳಿ ಕರ್ನಾಟಕದ ಮೀನುಗಾರರು ರಾಜ್ಯದ ಗಡಿಭಾಗದಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳು, ದಂಡ ವಿಧಿಸುವ ಬಗ್ಗೆ ಗೊಂದಲಗಳ ಬಗ್ಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದ ಮಲ್ಪೆ ಮೀನುಗಾರರ ಸಂಘದ ನಿಯೋಗ ಗೋವಾ ಮೀನುಗಾರಿಕೆ ಸಚಿವರಾದ ಶ್ರೀ ನೀಲಕಂಠ ಹಲರ್ನ್ಕರ್‌ರವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಕರ್ನಾಟಕ ಗೋವಾ ರಾಜ್ಯದ ಗಡಿ ಭಾಗದಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಉಭಯ ರಾಜ್ಯಗಳ ಸಮುದ್ರಗಳಲ್ಲಿ ಮೀನುಗಾರಿಕೆ ನಡೆಸುವ ನಾಟಿಕಲ್ ಮೈಲುಗಳ ವ್ಯಾಪ್ತಿ ವ್ಯತ್ಯಾಸದಿಂದ ಗೊಂದಲ ಹಾಗೂ ಮಾಹಿತಿಯ ಕೊರತೆಯಿಂದ ಗೋವಾ ಗಡಿಭಾಗ ಪ್ರವೇಶಿಸಿದಾಗ ಬೋಟ್‌ಗಳನ್ನು ವಶಪಡಿಸಿಕೊಂಡು ದೊಡ್ಡ ಮೊತ್ತದ ದಂಡ ವಿಧಿಸುವ ಪ್ರಕರಣಗಳು ನಡೆಯುತ್ತಿದ್ದು ಇದರಿಂದ ಕರಾವಳಿ ಜಿಲ್ಲೆಯ ಮೀನುಗಾರರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ ರಾಜ್ಯದಿಂದ ರಾಜ್ಯಕ್ಕೆ ಮೀನುಗಾರಿಕಾ ನಿಯಮಗಳು ವ್ಯತ್ಯಾಸವಿರುವ ಕಾರಣ ಮೀನುಗಾರರು ಸಂಕಷ್ಟ ಎದುರಿಸುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ ಎಂದರು.

ನಿಯೋಗದ ಮನವಿಗೆ ಸ್ಪಂದಿಸಿದ ಗೋವಾ ಮೀನುಗಾರಿಕಾ ಸಚಿವರು ಅಂತಾರಾಜ್ಯ ಮೀನುಗಾರಿಕೆ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆದಿರುವ ಬಗ್ಗೆ ಮಾಹಿತಿ ಇದ್ದು, ಈ ಎಲ್ಲಾ ಸಮಸ್ಯೆಗಳ ಗೊಂದಲ ನಿವಾರಿಸಲು ದೇಶದ ಪಶ್ಚಿಮ ಕರಾವಳಿಗೆ ಏಕರೂಪ ಮೀನುಗಾರಿಕಾ ನೀತಿ ಜಾರಿಯಾದಲ್ಲಿ ಪರಿಹಾರ ಸಿಗಲಿದೆ. ಶೀಘ್ರದಲ್ಲಿ ಪಶ್ಚಿಮ ಕರಾವಳಿ ರಾಜ್ಯಗಳ ಮೀನುಗಾರಿಕಾ ಸಚಿವರ ಸಭೆ ನಡೆಸಿ ಕೇಂದ್ರ ಸರ್ಕಾರದ ಮೂಲಕ ಏಕರೂಪ ಮೀನುಗಾರಿಕಾ ನೀತಿ ಅನುಷ್ಠಾನಗೊಳಿಸಿ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸಲು ಸಹಕಾರ ನೀಡುವ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆ ನಿರ್ದೇಶಕರಾದ ಶ್ರೀ ದಿನೇಶ್ ಕಲ್ಲೇರ್, ಮಲ್ಪೆ ಯಾಂತ್ರಿಕ ಟ್ರಾಲ್ ದೋಣಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಕುಂದರ್, ಉಪಾಧ್ಯಕ್ಷ ಶ್ರೀ ಪ್ರಕಾಶ್ ಬಂಗೇರ, ಮಲ್ಪೆ ಡೀಪ್ ಸೀ ಟ್ರಾಲ್ ಬೋಟ್ ಸಂಘದ ಅಧ್ಯಕ್ಷರಾದ ಶ್ರೀ ಸುಭಾಷ್ ಮೆಂಡನ್, 370 ಬೋಟ್ ಮೀನುಗಾರ ಸಂಘದ ಮಾಜಿ ಅಧ್ಯಕ್ಷ ಶ್ರೀ ಕಿಶೋರ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.

Related posts

ಮಹಾಲಕ್ಷ್ಮಿ ಬ್ಯಾಂಕ್ ಅವ್ಯವಹಾರ ಆರೋಪ; ಮಲ್ಪೆ ಠಾಣೆಯೆದುರು ಸಂತ್ರಸ್ತರ ಮೌನ ಪ್ರತಿಭಟನೆ

ಗೃಹಿಣಿ ನಾಪತ್ತೆ; ದೂರು ದಾಖಲು

ಡಾ| ಸಬೀಹ ಭೂಮಿಗೌಡ ಸಹಿತ ಐವರಿಗೆ ದತ್ತಿ ಪ್ರಶಸ್ತಿ