ಕಾರ್ಕಳ : ತಾಲೂಕಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ಕಂಚಿನ ಮೂರ್ತಿ ಬದಲು ಪರಶುರಾಮನ ನಕಲಿ ಮೂರ್ತಿಯನ್ನು ಸ್ಥಾಪಿಸಿ ಸರಕಾರಕ್ಕೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷ್ ಆರ್ಟ್ ವರ್ಲ್ಡ್ ಎಂಬ ಸಂಸ್ಥೆಯ ಮೂಲಕ ಕೃಷ್ಣ ಎಂಬಾತ ಕಾರ್ಕಳ ತಾಲೂಕಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1,25,50,000 ರೂ. ಹಣ ಪಡೆದುಕೊಂಡು ಕಾಮಗಾರಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ನಂತರ ಆರೋಪಿ ಕೃಷ್ಣ ಕಂಚಿನ ಮೂರ್ತಿಯನ್ನು ಮಾಡದೆ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ ನಲ್ಲೂರು ಗ್ರಾಮದ ಕೃಷ್ಣ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.