ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ ಹಾಗೂ ನಿರ್ವಾಹಕರಿಗೆ ಶಿಕ್ಷೆ

ಸುಳ್ಯ: ಕೆಎಸ್‌ಆರ್‌ಟಿಸಿ ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

2019ರ ಆ. 24ರಂದು ಘಟನೆ ನಡೆದಿತ್ತು. ಆಪಾದಿತ ವಿಷ್ಣು ಕುಮಾರ್‌ ಮತ್ತು ವಿಜಯಕುಮಾರ್‌ ಅವರು ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರಾಗಿದ್ದು, ನಿಂತಿಕಲ್ಲು ಕಡೆಯಿಂದ ಕಾಣಿಯೂರು ಕಡೆಗೆ ಸಂಚರಿಸುವ ವೇಳೆ ಬಸ್ಸಿನ ಪ್ರಯಾಣಿಕರು ಹತ್ತುವ ಹಾಗೂ ಇಳಿಯುವ ದ್ವಾರದ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸಿರಲಿಲ್ಲ. ಆಪಾದಿತ ವಿಷ್ಣು ಕುಮಾರ್‌ ಬಸ್ಸನ್ನು ಅಜಾಗರೂಕತೆಯಿಂದ ಚಲಾಯಿಸಿದ್ದು, ಈ ಪರಿಣಾಮ ಕಡಬ ತಾಲೂಕಿನ ಬೆಳಂದೂರು ಎನ್ನುವಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಮಹಮ್ಮದ್‌ ಅಫೀಸ್‌ ರಸ್ತೆಗೆ ಎಸೆಯಲ್ಪಟ್ಟು ಮುಖಕ್ಕೆ, ತಲೆಗೆ, ಕಾಲಿಗೆ ರಕ್ತ ಬರುವ ಹಾಗೂ ಗುದ್ದಿದ ಗಂಭೀರ ಸ್ವರೂಪದ ಗಾಯಗಳಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಸುಳ್ಯದ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಅರ್ಪಿತಾ ಆರೋಪಿಗಳ ಅಪರಾಧ ಸಾಬೀತಾಗಿ ಅವರನ್ನು ದೋಷಿ ಎಂದು ಘೋಷಿಸಿದ್ದು, 1ನೇ ಆರೋಪಿಗೆ ಕಲಂ 279ರಡಿಯಲ್ಲಿ 1 ತಿಂಗಳ ಜೈಲುವಾಸ ಮತ್ತು 1 ಸಾವಿರ ರೂ. ದಂಡ, ಕಲಂ 338ರಡಿಯಲ್ಲಿ 1 ತಿಂಗಳ ಜೈಲು ಮತ್ತು 1 ಸಾವಿರ ರೂ. ದಂಡ, 2ನೇ ಆರೋಪಿಗೆ ಕಲಂ 336ರಡಿಯಲ್ಲಿ 1 ತಿಂಗಳ ಜೈಲು ಮತ್ತು 250 ರೂ. ದಂಡ ವಿಧಿಸಲಾಗಿದೆ. ಎಲ್ಲ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗತಕ್ಕದ್ದು ಎಂದು ಆದೇಶಿಸಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕರು ವಾದಿಸಿದ್ದರು.

Related posts

ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ

ಸಾಲಬಾಧೆಯಿಂದ ಮನನೊಂದು ಯುವಕ ಆತ್ಮಹತ್ಯೆ

ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ – ಸುನಿಲ್ ಕುಮಾರ್ ವ್ಯಂಗ್ಯ