ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ ಜೀವಿತಾವಧಿ ಜೈಲು ಶಿಕ್ಷೆ

ಉಡುಪಿ : 2023ರ ಜೂನ್ ತಿಂಗಳಲ್ಲಿ ನಡೆದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೋ ಆರೋಪಿಗೆ ಜೀವಿತಾವಧಿ ಜೈಲುಶಿಕ್ಷೆ ವಿಧಿಸಿ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರಾಗಿ ದುಡಿಯಲು ಬಂದ ಕೂಲಿಕಾರ್ಮಿಕ ಪಶ್ಚಿಮ ಬಂಗಾಳ ಮೂಲದ ಮುಫಿಜುಲ್ ಎಸ್.ಕೆ.(23) ಶಿಕ್ಷೆಗೆ ಗುರಿಯಾದ ಆರೋಪಿ.

ನಿರ್ಮಾಣ ಹಂತದಲ್ಲಿರುವ ಕಟ್ಟಡ ಕೆಲಸಕ್ಕೆ ಬಂಗಾಳದಿಂದ ತನ್ನ ತಂದೆ, ತಾಯಿಯೊಂದಿಗೆ ಬಂದಿದ್ದ ಐದು ವರ್ಷ ಪ್ರಾಯದ ಬಾಲಕಿಯನ್ನು ಅದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಮುಫಿಜುಲ್ ತನ್ನ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಾಚಾರ ಎಸಗಿದ್ದನು. ಈ ವೇಳೆ ಬಾಲಕಿ ಅಳಲು ಪ್ರಾರಂಭಿಸಿದಾಗ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದ. ಈ ವಿಚಾರವನ್ನು ಆಕೆ ತನ್ನ ಪೋಷಕರಿಗೆ ತಿಳಿಸಿದ ಮೇರೆಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ದೂರು ನೀಡಲಾಗಿತ್ತು.

ಅದರಂತೆ ತನಿಖೆ ಕೈಗೊಂಡ ಅಂದಿನ ಪೊಲೀಸ್ ವೃತ್ತ ನಿರೀಕ್ಷಕ ಪೂವಯ್ಯ ಕೆ.ಸಿ., ಆರೋಪಿಯನ್ನು ಬಂಧಿಸಿ ಬಳಿಕ ಆತನ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಜೆ ಸಲ್ಲಿಸಿದ್ದರು.

ಒಟ್ಟು 30 ಸಾಕ್ಷಿಗಳ ಪೈಕಿ 17 ಸಾಕ್ಷಿಗಳ ವಿಚಾರಣೆ ಮಾಡಲಾಗಿತ್ತು. ನೊಂದ ಬಾಲಕಿಯು ಕೇವಲ ಬಂಗಾಳಿ ಭಾಷೆ ಮಾತ್ರ ತಿಳಿದಿದ್ದ ಕಾರಣ ಆ ಬಗ್ಗೆ ಅಭಿಯೋಜನೆ ಪರ ಸಾಕ್ಷಿ ಹೇಳಲು ಮಣಿಪಾಲ ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್ ಮಾಹೆಯ ಅಸಿಸ್ಟೆಂಟ್ ಪ್ರೊಫೆಸರ್ ರಿಚಾಗುಪ್ತ ಭಾಷಾಂತರಕಾರರಾಗಿ ವಿಚಾರಣೆ ವೇಳೆ ಸಹಕರಿಸಿದ್ದರು.

ನೊಂದ ಬಾಲಕಿಯ ಸಾಕ್ಷ್ಯ ಮತ್ತು ಸಾಂದರ್ಭಿಕ ಸಾಕ್ಷ್ಯ ಮತ್ತು ತನಿಖಾಧಿಕಾರಿಯು ತನಿಖೆ ಸಂದರ್ಭದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳಲ್ಲಿ ಕಂಡುಬಂದ ಸಾಕ್ಷಿಗಳ ತಜ್ಞರ ಅಭಿಪ್ರಾಯ, ಸಾಕ್ಷಿಗಳನ್ನು ಪರಿಗಣಿಸಿದ ನ್ಯಾಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಯು ತಪ್ಪಿತಸ್ಥ ಎಂದು ಮನಗೊಂಡು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಆರೋಪಿಗೆ ಜೀವಿತಾವಧಿ ಜೈಲು ಶಿಕ್ಷೆ ಹಾಗೂ 20 ಸಾವಿರ ‌ರೂ. ದಂಡ ವಿಧಿಸಿ ಮತ್ತು ಸರಕಾರದಿಂದ ನೊಂದ ಬಾಲಕಿಗೆ 3 ಲಕ್ಷ ರೂ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ