ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

ಪುತ್ತಿಲ ಪರಿವಾರ ಸಂಘಟನೆಯ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.

ಸಾಮೆತ್ತಡ್ಕದ ನಿವಾಸಿ 47 ವರ್ಷದ ಮಹಿಳೆ ಪುತ್ತಿಲ ವಿರುದ್ದ ಲೈಂಗಿಕ ದೌರ್ಜನ್ಯ ಕೇಸು ದಾಖಲಿಸಿದ್ದಾರೆ. ಕಳೆದ ವರ್ಷ 2023ರ ಜೂನ್ ತಿಂಗಳಲ್ಲಿ ಬೆಂಗಳೂರಿನ ಹೋಟೆಲ್ ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಆ ಬಳಿಕ ಬ್ಲಾಕ್ ಮೇಲ್ ಮಾಡಿಕೊಂಡು ಅವರಿರುವ ಪ್ರದೇಶಕ್ಕೆ ಕರೆಸಿಕೊಂಡು ಅವರ ಕೆಲಸ ಮಾಡುತ್ತಿದ್ದರು ಎಂದು ಮಹಿಳೆ ದೂರಿದ್ದಾರೆ.

ನನಗೆ ಹಾಗೂ ತನ್ನ ಪುತ್ರಿಗೆ ಜೀವನ ಪೂರ್ತಿ ಯಾವುದೇ ಕುಂದು ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ನಂಬಿಸಿ ನನ್ನನ್ನು ದೈಹಿಕ ಹಾಗೂ ಮಾನಸಿಕವಾಗಿ ಬಳಸಿಕೊಳ್ಳುತ್ತಿದ್ದರು. ಅವರೊಂದಿಗೆ ನಾನು ಇದ್ದ ಕ್ಷಣಗಳ ಛಾಯಾ ಚಿತ್ರ, ಸೆಲ್ಫಿ, ಆಡಿಯೋ, ವಿಡಿಯೋಗಳು ಇದೆಯೆಂದು ಹೇಳಿಕೊಂಡು ಬೆದರಿಸಿ ಅವರ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು ಎಂದು ಸಂತ್ರಸ್ತೆ‌ ಎನ್ನಲಾದ ಮಹಿಳೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ‌

2024ರ ಲೋಕಸಭಾ ಚುನಾವಣೆಯ ಬಳಿಕ ನಮ್ಮಲ್ಲಿ ಮಾತುಕತೆ ಕಡಿಮೆ ಮಾಡಿದ್ದು, ಭಯಗೊಂಡು ನಾನು ಪುತ್ತೂರಿಗೆ ವಾಸ ಬದಲಾವಣೆ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಉದ್ಯೋಗ ಹಾಗೂ ವರಮಾನವಿಲ್ಲದೆ ಬಾಡಿಗೆ ಮನೆಯಲ್ಲಿದ್ದುಕೊಂಡು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಹಿಳೆ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಪ್ರಕರಣ ಕೇಸು ದಾಖಲಾಗಿದೆ. ಮಹಿಳೆಯು ನೀಡಿದ ದೂರಿನ ಮೇರೆಗೆ ಹಳೆಯ ಐಪಿಸಿ ಸೆಕ್ಷನ್‌ 417, 354ಎ, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈನಲ್ಲಿ ದೇಶದಲ್ಲಿ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬಂದಿದೆ.‌ ಈ ಘಟನೆಯು ನೂತನ ಕಾನೂನು ಜಾರಿಗೆ ಬರುವುದಕ್ಕೂ ಮೊದಲೇ ನಡೆದಿರುವುದಾಗಿ ತಿಳಿಸಿರುವುದರಿಂದ ಹಳೆಯ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

ಅರುಣ್ ಕುಮಾರ್ ಪುತ್ತಿಲರವರು ಮಹಿಳೆಯೊಂದಿಗೆ ಮಾತನಾಡಿದ್ದು ಎನ್ನಲಾಗಿದ್ದ ಆಡಿಯೋವೊಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ‌ಅದರ ಬೆನ್ನಲ್ಲೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ.

ಅರುಣ್‌ ಪುತ್ತಿಲ ಅವರು,2023ರಲ್ಲಿ ಪುತ್ತೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿಗೆ ಠಕ್ಕರ್‌ ಕೊಟ್ಟು ಹಿಂದುತ್ವದ ಹೆಸರಿನಲ್ಲಿ ಸ್ಪರ್ಧೆ ಮಾಡಿ ಪ್ರಖ್ಯಾತಿ ಪಡೆದಿದ್ದರು. ಪುತ್ತಿಲ ಅವರ ಪ್ರಖ್ಯಾತಿ ಮತ್ತು ಹಿಂದುತ್ವದ ಪ್ರತಿಪಾದನೆಯಿಂದ ಮಹಿಳೆ ಅಭಿಮಾನಿಯಾಗಿದ್ದರು. ಪುತ್ತಿಲಗೆ ಅಭಿಮಾನಿ ಆಗಿ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದರು. ಜೊತೆಗೆ ಪುತ್ತಿಲಗೆ ನೈತಿಕ ಬೆಂಬಲವನ್ನೂ ನೀಡುತ್ತಿದ್ದರು. ಬಳಿಕ ಪರಿಚಯವಾದ ಮೇಲೆ ಪುತ್ತಿಲ ಅವರು 2023ರ ಜೂನ್‌ನಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿದ್ದಾರೆ. ಬಳಿಕ ದೂರುದಾರರ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !