ಈಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆಗೆ ದಾಳಿ; 30 ಲಕ್ಷ ರೂ. ಲೂಟಿ

ವಿಟ್ಲ: ನಾವು ಈಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿ ಬರೋಬ್ಬರಿ 30 ಲಕ್ಷ ರೂ. ಲೂಟಿ ಮಾಡಿದ ಘಟನೆ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಸುಲೈಮಾನ್ ಹಾಜಿ ಅವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರ್‌ನಲ್ಲಿ ಆಗಮಿಸಿದ ತಂಡ ಬಂದು ದಿಢೀರ್ ದಾಳಿ ನಡೆಸಿದೆ. ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡು ಗಂಟೆಗಳ‌ವರೆಗೆ ತನಿಖೆ ನಡೆಸಿದೆ.

ಮನೆಯಲ್ಲಿದ್ದ ಸುಮರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದರು. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

ವಿಟ್ಲ ನಕಲಿ ಈಡಿ ದಾಳಿ: ಎಫ್‌ಐಆರ್‌‌ನಲ್ಲಿ ಏನಿದೆ?

ವಿಟ್ಲ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಪ್ರಕಾರ, “ಶುಕ್ರವಾರ ರಾತ್ರಿ 8:10‌ರ ಸುಮಾರಿಗೆ ತಮಿಳುನಾಡಿನ ನೋಂದಣಿ ಹೊಂದಿರುವ ವಾಹನದಲ್ಲಿ ದೂರುದಾರರ ಮನೆಗೆ ಬಂದಿರುವ ವಂಚಕರು, ತಮ್ಮನ್ನು ಈಡಿ ಅಧಿಕಾರಿಗಳು ಎಂದು ಪರಿಚಯಿಸಿ, ಮನೆಯವರ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ” ಎಂದು ತಿಳಿದು ಬಂದಿದೆ.

6 ಮಂದಿಯ ವಂಚಕರ ತಂಡವು, ಮನೆಯವರ ಮೊಬೈಲ್‌ಗಳನ್ನು ತಮ್ಮ ವಶಕ್ಕೆ ಪಡೆದು, ಬಳಿಕ ಮನೆಯನ್ನೆಲ್ಲಾ ತಡಕಾಡಿದ್ದು, ಮನೆ ಪರಿಶೀಲನೆಗೆ ನಮಗೆ ಆದೇಶವಾಗಿದೆ ಎಂದು ದೂರುದಾರರ ಕುಟುಂಬವನ್ನು ನಂಬಿಸಿದ್ದಾರೆ. ಈ ವೇಳೆ, ಉದ್ಯಮಿಯ ಕೋಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು 25 ರಿಂದ 30 ಲಕ್ಷ ಹಣವನ್ನು ವಶಕ್ಕೆ ಪಡೆದ ವಂಚಕರು, ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ, ನಿಮ್ಮನ್ನು ಅರೆಸ್ಟ್ ಮಾಡಿ, ಕಸ್ಟಡಿಗೆ ತೆಗೆದುಕೊಳ್ಳುವುದಾಗಿಯೂ ಹೆದರಿಸಿದ್ದಾಗಿ ಎಫ್‌ಐಆರ್‌‌ನಲ್ಲಿ ಉಲ್ಲೇಖಿಸಲಾಗಿದೆ.

“ರಾತ್ರಿ ಸುಮಾರು 10.30 ಗಂಟೆಗೆ ಆರೋಪಿಗಳು ಮನೆಯಿಂದ ನಿರ್ಗಮಿಸಿದ್ದು, ಈ ವೇಳೆ ಅವರು ಪಡೆದುಕೊಂಡಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ, ಹಣವನ್ನು ಬೆಂಗಳೂರಿನಲ್ಲಿರುವ ಆಫೀಸಿನಿಂದ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ” ಎಂದು ದೂರು ಬಂದಿರುವುದಾಗಿ ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ಈ ಬಗ್ಗೆ ದೂರುದಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದಾಗ ಅಪರಿಚಿತ ವ್ಯಕ್ತಿಗಳು ಈಡಿ ಅಧಿಕಾರಿಗಳಂತೆ ನಟಿಸಿ ಮನೆಯಿಂದ ಸುಮಾರು 25 ರಿಂದ 30 ಲಕ್ಷ ಹಣವನ್ನು ಮತ್ತು 5 ಮೊಬೈಲ್ ಫೋನ್‌ಗಳನ್ನು ಪಡೆದುಕೊಂಡು ವಂಚನೆ ಮಾಡಿರುವುದು ತಿಳಿದು ಬಂದಿದೆ ಎಂದು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 02/2025 ಕಲಂ: 319(2), 318(4) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಸದ್ರಿ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ರವರು ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಳ ಪತ್ತೆಗಾಗಿ ಸೂಕ್ತ ಸಲಹೆ/ಸೂಚನೆ ನೀಡಿದರು.

Related posts

ಮೈಕ್ರೋ-ಫೈನಾನ್ಸ್, ಲೇವಾದೇವಿ ಸಂಸ್ಥೆಗಳ ನೋಂದಣಿ ಕಡ್ಡಾಯ – ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ

ನ್ಯಾಯಾಲಯಕ್ಕೆ ಹಾಜರಾಗದೆ 34 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಕರ್ಕಶ ಸೈಲೆನ್ಸರ್ ಶಬ್ದ : ದಂಡ ವಿಧಿಸಿ ಸೈಲೆನ್ಸರ್ ತೆರವು