ಡಿ.28ರಂದು 8ನೇ ವರ್ಷದ ಮಂಗಳೂರು ಕಂಬಳ ವೈಭವ: ಸಂಸದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು : ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡು ಕೆರೆಯಲ್ಲಿ ಡಿ.28‌ರಂದು 8ನೇ ವರ್ಷದ ‘ಮಂಗಳೂರು ಕಂಬಳ’ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಕಂಬಳದ ಕುರಿತು ಮಾಹಿತಿ ನೀಡಿದ ಅವರು, ‘ಡಿ. 28ರಂದು ಬೆಳಿಗ್ಗೆ 8.30ಕ್ಕೆ ದಿ. ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಸಭಾಕಾರ್ಯಕ್ರಮ ನಡೆಯಲಿದ್ದು, ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ತಂದೆ, ಎಂಆರ್‌ಪಿಎಲ್‌ನ ನಿವೃತ್ತ ಆಡಳಿತ ನಿರ್ದೇಶಕರಾದ ಎಂ.ವೆಂಕಟೇಶ್‌ ಕಂಬಳ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಕೆ. ಚಿತ್ತರಂಜನ್‌ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಶ್ರೀ ಜಿತಕಾಮಾನಂದ ಜೀ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಕಟೀಲು ದೇವಳದ ಅರ್ಚಕ‌ ಅನಂತ ಪದ್ಮನಾಭ ಅಸ್ರಣ್ಣ ಸೇರಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸುತ್ತಾರೆ’ ಎಂದು ಹೇಳಿದರು.

‘ಅದೇ ದಿನ ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಆರ್.ಜಿ ಗ್ರೂಪ್‌ನ ಸಿ.ಎಂ.ಡಿ, ಮಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಡಾ. ಕೆ ಪ್ರಕಾಶ್ ಶೆಟ್ಟಿ ವಹಿಸಲಿದ್ದಾರೆ. ಇವರೊಂದಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌, ಮಂಗಳೂರು, ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್‌ ಶೆಟ್ಟಿ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಹಾಲಿ-ಮಾಜಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಇತರೆ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಉದ್ಯಮಿಗಳು, ಗಣ್ಯರು ಭಾಗವಹಿಸುವರು’ ಎಂದರು.

ಮುಂದಿನ ಪೀಳಿಗೆಯ ಹಾಗೂ ಡಿಜಿಟಲ್ ಯುಗದ ಮಕ್ಕಳು ನಮ್ಮ ತುಳುನಾಡಿನ ಸಂಸ್ಕೃತಿಯ ಜೊತೆ ಜೊತೆಗೆ ಬೆಳೆಯಬೇಕು. ಏಕೆಂದರೆ, ಕಂಬಳವು ದಕ್ಷಿಣ ಕನ್ನಡದ ಕರಾವಳಿಯ ಸಂಸ್ಕೃತಿಯ ವಿಶಿಷ್ಟತೆಯ ಪ್ರತೀಕ. ಅಲ್ಲದೆ, ಮಂಗಳೂರು ಸೇರಿದಂತೆ ಕರಾವಳಿಗೆ ಆಗಮಿಸುತ್ತಿರುವ ಪ್ರವಾಸಿಗರಿಗೆ ಅನುಕೂಲವಾಗುವ ಉದ್ದೇಶದಿಂದ ಮಂಗಳೂರು ನಗರ ಭಾಗದಲ್ಲಿ ಕಳೆದ ಏಳು ವರ್ಷಗಳಿಂದ ವ್ಯವಸ್ಥಿತವಾಗಿ ಮಂಗಳೂರು ಕಂಬಳವನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಈ ಬಾರಿ ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಕನೆ ಹಲಗೆ, ಅಡ್ಡ ಹಲಗೆ ಹೀಗೆ ಒಟ್ಟು ಆರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ಕಂಬಳ ಸಮಿತಿ ಉಪಾಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ ಮಾತನಾಡಿ, ‘ಕಂಬಳದ ಅಂಗವಾಗಿ ಕಲರ್‌ಕೂಟ ಡ್ರಾಯಿಂಗ್ ಸ್ಪರ್ಧೆ ನಡೆಯಲಿದೆ. 10 ವರ್ಷದವರೆಗಿನ ಮಕ್ಕಳು ‘ರಂಗ್‌ದ ಎಲ್ಯ’, 10ರಿಂದ 15 ವರ್ಷದೊಳಗಿನ ಮಕ್ಕಳು ‘ರಂಗ್‌ದ ಮಲ್ಲ’ ವಿಭಾಗದಲ್ಲಿ ಭಾಗವಹಿಸಬಹುದು. ಇನ್ನು ರಂಗ್‌ ಕೂಟ ವಿಭಾಗದಲ್ಲಿ ವಯೋಮಿತಿಯ ನಿರ್ಬಂಧ ಇಲ್ಲ. ಫೋಟೊಗ್ರಾಫಿ ಸ್ಪರ್ಧೆ ಹಾಗೂ
ರೀಲ್ಸ್ ಸ್ಪರ್ಧೆಗಳು ಕೂಡ ನಡೆಯಲಿವೆ. ರೀಲ್ಸ್ ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವಾಗ #mangalurukambala8 ಹ್ಯಾಷ್ ಟ್ಯಾಗ್ ಬಳಸಬೇಕು’ ಎಂದರು.

ಸಂಸದನಾಗಿ ಮೊದಲ ಕಂಬಳ

“ಮಂಗಳೂರಿನಲ್ಲಿ ಕಳೆದ ಏಳು ವರ್ಷದಿಂದ ವ್ಯವಸ್ಥಿತ ರೀತಿಯಲ್ಲಿ ನಮ್ಮ ತಂಡದ ಎಲ್ಲರ ಸಹಕಾರದೊಂದಿಗೆ ಮಂಗಳೂರು ಕಂಬಳ ಆಯೋಜನೆ ಮಾಡುತ್ತಿದ್ದೇವೆ. ಆದರೆ, ಸಂಸದನಾಗಿ ಇದು ನನ್ನ ಪಾಲಿಗೆ ಮೊದಲ ಕಂಬಳ ಮುನ್ನಡೆಸುವ ಅವಕಾಶ ನೀಡಿದೆ. ತುಳುನಾಡಿನ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುವ ಕಂಬಳದ ಪರಂಪರೆಯನ್ನು ದೇಶವ್ಯಾಪಿ ಹಾಗೂ ವಿಶ್ವ ಮಟ್ಟದಲ್ಲಿ ಗುರುತಿಸುವಲ್ಲಿ ಬಹುದೊಡ್ಡ ಜವಾಬ್ದಾರಿಯಿದೆ. ಹೀಗಿರುವಾಗ, ಮಂಗಳೂರು ಕಂಬಳವನ್ನು ಒಂದು ಕ್ರೀಡೆಗಿಂತ ಹೆಚ್ಚಾಗಿ ಅದರೊಂದಿಗೆ ಭಾವನಾತ್ಮಕವಾಗಿ ಬೆಳೆದು ಬಂದಿರುವ ಈ ಸಂಸ್ಕೃತಿಯನ್ನು ಮತ್ತಷ್ಟು ಕಡೆ ವ್ಯಾಪಕಗೊಳಿಸುವತ್ತ ಹೆಚ್ಚಿನ ಗಮನಹರಿಸಲಾಗುವುದು. ಆ ಮೂಲಕ 8ನೇ ಮಂಗಳೂರು ಕಂಬಳದ ಯಶಸ್ವಿ ಆಯೋಜನೆಗೆ ಪ್ರಯತ್ನಿಸಲಾಗುವುದು” ಎಂದು ಸಂಸದ ಕ್ಯಾ. ಚೌಟ ಹೇಳಿದ್ದಾರೆ.

29ರಂದು ಕಂಬಳದ ಫೈನಲ್‌ ಸ್ಪರ್ಧೆ

ಎರಡು ದಿನಗಳ ಮಂಗಳೂರು ಕಂಬಳದಲ್ಲಿ ಫೈನಲ್‌ ಸ್ಪರ್ಧೆ ಡಿ.29ರಂದು ಬೆಳಗ್ಗೆ. ಆದರೆ, ಕಂಬಳದ ಹತ್ತಿರದಿಂದ ಬಲ್ಲವರಿಗೆ ಹೊರತಾಗಿ ಜನಸಾಮಾನ್ಯರಿಗೆ ಭಾನುವಾರ ಕೂಡ ಕಂಬಳ ಓಟ ನಡೆಯುತ್ತದೆ ಎನ್ನುವ ಮಾಹಿತಿ ಅಷ್ಟಾಗಿ ಇರುವುದಿಲ್ಲ. ಈ ಕಾರಣಕ್ಕೆ 29ರ ಬೆಳಗ್ಗೆ ನಡೆಯುವ ಮಂಗಳೂರು ಕಂಬಳದ ಹೆಚ್ಚು ಕುತೂಹಲ ಹಾಗೂ ಆಸಕ್ತಿ ಮೂಡಿಸುವ ಫೈನಲ್‌ ಸ್ಪರ್ಧೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಭಾಗವಹಿಸಬಹುದು.

ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಉಪಾಧ್ಯಕ್ಷರಾದ ಅಶೋಕ್ ಕೃಷ್ಣಾಪುರ, ಪ್ರಕಾಶ್‌ ಗರೋಡಿ, ವಸಂತ್ ಪೂಜಾರಿ, ಕಾರ್ಯದರ್ಶಿ ಸಾಕ್ಷತ್ ಶೆಟ್ಟಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Related posts

ಬೆಂಕಿ ಆಕಸ್ಮಿಕ – ಸಂಪೂರ್ಣ ಅಗ್ನಿಗಾಹುತಿಯಾದ ಸ್ವೀಟ್ಸ್ ಮಳಿಗೆ

ಅನೂಪ್ ಮತ್ತು ಮಂಜುಶ್ರೀ ಇತ್ತೀಚೆಗೆ ಹಾಡಿದ್ದ ಹಾಡಿನ ವೀಡಿಯೋ ಇದೀಗ ವೈರಲ್

ಖ್ಯಾತ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಕುಟುಂಬ ಸಮೇತ ಶ್ರೀ ಕೃಷ್ಣ ಮಠಕ್ಕೆ ಭೇಟಿ – ಶ್ರೀಗಳಿಂದ ಸನ್ಮಾನ