ಜೂನ್ 7ರಿಂದ ವೈಕುಂಠ ಬಾಳಿಗಾ ಕಾಲೇಜಿನಲ್ಲಿ 8ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ; ವಿವಿಧ ರಾಜ್ಯಗಳ ಕಾನೂನು ಕಾಲೇಜುಗಳ 18 ತಂಡಗಳು ಭಾಗಿ

ಉಡುಪಿ : ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ವಕೀಲ ಪಿ. ಶಿವಾಜಿ ಶೆಟ್ಟಿ ಸ್ಮಾರಕ 8ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಇದೇ ಜೂನ್ 7ರಿಂದ 9ರವರೆಗೆ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿರ್ಮಲ ಕುಮಾರಿ ಹೇಳಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಕಾನೂನು ಕಾಲೇಜುಗಳ 18 ತಂಡಗಳು ಭಾಗವಹಿಸಲಿವೆ. ಜೂನ್ 7ರಂದು ಸಂಜೆ 5 ಗಂಟೆಗೆ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ದಿವಂಗತ ಪಿ. ಶಿವಾಜಿ ಶೆಟ್ಟಿ ಅವರ ಧರ್ಮಪತ್ನಿ ಜಯಂತಿ ಪಿ.ಶಿವಾಜಿ ಶೆಟ್ಟಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಜೂನ್ 9ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಈಶ್ವರನ್ ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ಪ್ರೊ. ಚಿದಾನಂದ ರೆಡ್ಡಿ ಎಸ್. ಪಾಟೀಲ್‌ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಪ್ರಾಂಶುಪಾಲೆ ಸುರೇಖ, ಜಯಂತಿ ಪಿ.ಶಿವಾಜಿ ಶೆಟ್ಟಿ, ಈರಪ್ಪ ಎಸ್. ಮೆಡಾರ್ ಉಪಸ್ಥಿತರಿದ್ದರು.

Related posts

ಅಪ್ತಿ ಆಚಾರ್ಯ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ

ನಾಗರಿಕ ಸಮಿತಿಯ ನೇತೃತ್ವದಲ್ಲಿ ಅಪರಿಚಿತ ಶವದ ಅಂತ್ಯ ಸಂಸ್ಕಾರ

ದಲಿತ ಚಿಂತಕ ಜಯನ್ ಮಲ್ಪೆಗೆ ರಾಜ್ಯ ಸರಕಾರದಿಂದ ಡಾ|ಬಾಬು ಜಗಜೀವನ ರಾಂ ಪ್ರಶಸ್ತಿ