ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಘಟಕವಾಗಿರುವ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ [ಎಂಐಟಿ] ಯು ರಾಷ್ಟ್ರದ 78ನೆಯ ಸ್ವಾತಂತ್ರ್ಯೋತ್ಸವವನ್ನು ಬೇಸಿಕ್ ಸಾಯನ್ಸ್ ಕಟ್ಟಡ [ಹಿಂದಿನ ಎಂಎಂಎಂಸಿ, ಮಣಿಪಾಲ] ದ ಮುಂಭಾಗದಲ್ಲಿ ಆಚರಿಸಿತು.
ಡಾ. ಎಚ್. ಎಸ್. ಬಲ್ಲಾಳ್ ಸಹ-ಕುಲಾಧಿಪತಿಗಳು, ಮಾಹೆ ಇವರು ಪ್ರಧಾನ ಅಭ್ಯಾಗತರಾಗಿ ಮತ್ತು ಲೆ. ಜ. [ಡಾ.] ಎಂ. ಡಿ. ವೆಂಕಟೇಶ್, ಉಪಕುಲಪತಿಗಳು, ಮಾಹೆ, ಮಣಿಪಾಲ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಪಿ. ಗಿರಿಧರ ಕಿಣಿ, ಕುಲಸಚಿವರು, ಮಾಹೆ, ಮಣಿಪಾಲ ಮತ್ತು ಡಾ. ಸೋಮಶೇಖರ ಭಟ್, ಜಂಟಿ ನಿರ್ದೇಶಕರು, ಎಂಐಟಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು.
ಬೆಳಗ್ಗೆ 8.50ಕ್ಕೆ ಬೇಸಿಕ್ ಸಾಯನ್ಸ್ ಬಿಲ್ಡಿಂಗ್‌ನ ಮುಂಭಾಗದಲ್ಲಿ ಆರಂಭವಾದ ಕಾರ್ಯಕ್ರಮದ ಆರಂಭದಲ್ಲಿ ಎಂಐಟಿಯ ಜಂಟಿ ನಿರ್ದೇಶಕರಾದ ಡಾ. ಸೋಮಶೇಖರ ಭಟ್ ಅವರು ಸ್ವಾಗತ ಭಾಷಣ ಮಾಡಿದರು. ಮುಖ್ಯ ಅತಿಥಿಗಳು ಸಮಾವೇಶ, ಪಥಸಂಚಲನದೊಂದಿಗೆ ರಾಷ್ಟ್ರಧ್ವಜಾರೋಹಣ ಮಾಡಿದರು. ಬಳಿಕ, ಸ್ವಾತಂತ್ರ್ಯೋತ್ಸವ ಸಂದೇಶವನ್ನು ನೀಡಿ, ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಡಾ. ಎಚ್. ಎಸ್. ಬಲ್ಲಾಳ್ ಅವರು ತಮ್ಮ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಹೀಗೆ ಹೇಳಿದರು: ನಾವು ಇವತ್ತು ರಾಷ್ಟ್ರದ ಸ್ವಾತಂತ್ರ್ಯೋತ್ಸವವನ್ನು ಆಚರಿಸುವುದರ ಜೊತೆಗೆ ಸೌಹಾರ್ದತೆ, ಉದಾರತೆ ಮತ್ತು ಮಾನವೀಯತೆಯ ಗುಣಗಳನ್ನು ಸಂಭ್ರಮಿಸುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವುದಕ್ಕಾಗಿ ಬಲಿದಾನ ಮಾಡಿದ ಗತಕಾಲದ ಮಹಾತ್ಮರನ್ನು ಗೌರವಿಸಬೇಕು. ಜೊತೆಗೆಯೇ ಸಾಕಲ್ಯ, ನಾವೀನ್ಯ ಮತ್ತು ಶಿಕ್ಷಣವನ್ನು ಹೊಂದಿರುವ ಭವಿಷ್ಯದ ಜನಾಂಗವನ್ನು ರೂಪಿಸುವುದರ ಕಡೆಗೆ ನಾವು ಪ್ರಯತ್ನಶೀಲರಾಗಬೇಕು. ನಮ್ಮ ಒಗ್ಗಟ್ಟಿನ ಕೆಲಸದಿಂದ ಸಮಾಜದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಮತ್ತು ಈ ದೇಶದ ಅದ್ಭುತ ಪರಂಪರೆಯನ್ನು ಎತ್ತಿಹಿಡಿದು ಹೆಮ್ಮೆ ಪಡಬೇಕು.
ಲೆ. ಜ. [ಡಾ.] ಎಂ. ಡಿ. ವೆಂಕಟೇಶ್ ಅವರು ತಮ್ಮ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಹೀಗೆ ಹೇಳಿದರು :
ಸ್ವಾತಂತ್ರ್ಯೋತ್ಸವ ಆಚರಣೆಯ ಈ ಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡಲು ಶ್ರಮಿಸಿದವರನ್ನು ಮತ್ತು ಸಮಗ್ರತೆ, ದೃಢತೆ, ಅಭಿವೃದ್ಧಿಯ ಅವಿಚ್ಛಿನ್ನ ಸಂಕಲ್ಪಗಳೊಂದಿಗೆ ಭವ್ಯ ರಾಷ್ಟ್ರವನ್ನು ರೂಪಿಸಿದವರನ್ನು ಸ್ಮರಿಸಬೇಕಾಗಿದೆ. ಶೈಕ್ಷಣಿಕ ಆವರಣದ ಒಳಗೆ ಮತ್ತು ಹೊರಗೆ ರಾಷ್ಟ್ರಪರವಾದ ಗುಣಗಳನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ಹೊಂದಬೇಕು. ನಾವೀನ್ಯ, ಸಾಕಲ್ಯ ಮತ್ತು ಶ್ರೇಷ್ಠತೆಯನ್ನು ಬೆಂಬಲಿಸುವುದರ ಮೂಲಕ ರಾಷ್ಟ್ರದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಒಮ್ಮತದಿಂದ ಸಹಕಾರ ನೀಡಬೇಕಾಗಿದೆ. ಎಲ್ಲರಿಗೂ 78ನೆಯ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
ಎಂಐಟಿಯ ಮೆಕ್ಯಾನಿಕಲ್ ಮತ್ತು ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ [ಹಿರಿಯ ಶ್ರೇಣಿ] ಪ್ರೊ ಸುಹಾಸ್ ಕೌಶಿಕ್ ಮತ್ತು ಮೆಕ್ಯಾಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ, ಎಂಐಟಿ, ಮಣಿಪಾಲ ಇದರ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿಲ್ಪಾ ಸುರೇಶ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಡಾ. ಶ್ರೀರಾಮ ಕೆ. ವಿ., ಎಮ್‌ಐಟಿ ಯ ಸಹ-ನಿರ್ದೇಶಕರು ಹಾಗು ಇಂಡಸ್ಟ್ರಿ ಸಂಪರ್ಕ, ಪ್ಲೇಸ್‌ಮೆಂಟ್ ಮತ್ತು ಪ್ರಾಕ್ಟೀಸ್ ಅವರು ಧನ್ಯವಾದ ಸಮರ್ಪಿಸುತ್ತ, ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ತಂಡ [ಕಂಟಿನ್‌ಜೆಂಟ್] ಪ್ರಶಸ್ತಿ ಪುರಸ್ಕೃತರು:
ಎಂಐಟಿಯು ಕೌಶಲ, ಬದ್ಧತೆ ಮತ್ತು ಒಗ್ಗಟ್ಟಿನಿಂದ ಪ್ರಯತ್ನದಿಂದ ಪ್ರತಿಷ್ಠಿತ ಪ್ರಥಮ ತಂಡ ಪ್ರಶಸ್ತಿಯನ್ನು ಗಳಿಸಿದೆ. ಕೆಎಂಸಿಯು ಎರಡನೆಯ ಸ್ಥಾನವನ್ನು ಪಡೆದರೆ, ಮೂರನೆಯ ಸ್ಥಾನವನ್ನು ಮಣಿಪಾಲ್ ಕಾಲೇಜು ಆಫ್ ಹೆಲ್ತ್ ಪ್ರೊಫೆಶನಲ್ಸ್ ಗಿಟ್ಟಿಸಿಕೊಂಡಿದೆ.