ಉಡುಪಿ : ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ ಅನ್ವಯ ನಾಮಫಲಕದಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆ ಶೇ.60ರಷ್ಟು ಪ್ರದರ್ಶಿಸದೆ ಇರುವುದು ಪರಿಶೀಲನೆ ವೇಳೆ ಕಂಡುಬಂದಿದ್ದು, ನಿಯಮವನ್ನು ಪಾಲಿಸದಿರುವ ಸಂಘ, ಸಂಸ್ಥೆ ಹಾಗೂ ಘಟಕಗಳಿಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಮಸೂದೆ ಅನ್ವಯ ಮೊದಲನೇ ಅಪರಾಧಕ್ಕಾಗಿ 5 ಸಾವಿರ ರೂ. ರವರೆಗೆ, ಎರಡನೇ ಅಪರಾಧಕ್ಕಾಗಿ ರೂ. 10ಸಾವಿರ ರೂ. ರವರೆಗೆ, ಅನಂತರದ ಪ್ರತಿಯೊಂದು ಅಪರಾಧಕ್ಕಾಗಿ 20,000 ರೂ. ರವರೆಗೆ ದಂಡ ವಿಧಿಸಿ ಪರವಾನಿಗೆ ರದ್ದುಗೊಳಿಸಲಾಗುವುದು.
ಜಿಲ್ಲೆಯಲ್ಲಿ ನಾಮಫಲಕಗಳಲ್ಲಿ ಸಂಘ, ಸಂಸ್ಥೆ ಹಾಗೂ ಘಟಕದ ಹೆಸರು ಮತ್ತು ವಿಳಾಸ ಕನ್ನಡದಲ್ಲಿ ಫಲಕಗಳ ಮೇಲ್ಭಾಗದಲ್ಲಿ ಶೇ.60 ರಷ್ಟು ಪ್ರದರ್ಶಿಸುವ ಮೂಲಕ ಪರಿಷ್ಕೃತ ಫಲಕವನ್ನು ಆಗಸ್ಟ್ 30ರೊಳಗಾಗಿ ಅಳವಡಿಸಬೇಕು. ಅನಂತರದ ದಿನಗಳಲ್ಲಿ ತಪಾಸಣೆ ಸಂದರ್ಭ ನಾಮಫಲಕದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಮೇಲೆ ವಿವರಿಸಿರುವ ದಂಡನೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.