ಉಡುಪಿ : ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿ ದ್ವಿತೀಯ ಪಿ.ಯು.ಸಿ.ಯ ಸತ್ಯವತಿಗೆ ಕುಂದಾಪುರ ತಾಲೂಕಿನ ಕೋಟೇಶ್ವರದ ಮೇಲ್ಕಟ್ಕೆರೆಯಲ್ಲಿ ವಿದ್ವಾನ್ ಪಂಜ ಭಾಸ್ಕರ ಭಟ್ ಅವರ ಪ್ರಾಯೋಜಕತ್ವದಲ್ಲಿ ರೂ.6 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ಚಂದ್ರಿಕಾ ನಿಲಯ ಉದ್ಘಾಟನೆಗೊಂಡಿತು.
ವೇ. ಮೂ ಕಡಂದಲೆ ಕೆ.ವಿ.ಕೃಷ್ಣ ಭಟ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ವಿದ್ವಾನ್ ಪಂಜ ಭಾಸ್ಕರ ಭಟ್ – ಶ್ರೀಮತಿ ಚಂದ್ರಿಕಾ ಭಾಸ್ಕರ ಭಟ್ ದಂಪತಿ ಅವರ ಸುಪುತ್ರ ಶ್ರೀವತ್ಸ, ಸೊಸೆ ಕೌಸಲ್ಯಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ, ಕಲಾರಂಗದ ಕಾರ್ಯಕರ್ತರ ನಿಸ್ವಾರ್ಥ ಸಾಮಾಜಿಕ ಕಾರ್ಯ ಎಲ್ಲರಿಗೆ ಮಾದರಿಯಾಗಿದೆ ಎಂದರು. ಕಲಾರಂಗದ ಸಮಾಜಸೇವೆಯೆಂಬ ಬ್ರಹ್ಮರಥದ ಹಗ್ಗ ಹಿಡಿಯುವ ಅವಕಾಶ ನಮ್ಮ ಕುಟುಂಬಕ್ಕೊದಗಿದ ಭಾಗ್ಯ. ನಾನು ಕಲಾರಂಗದ ಸದಸ್ಯ ಎನ್ನಲು ಹೆಮ್ಮೆಪಡುತ್ತೇನೆ ಎಂದು ಭಾಸ್ಕರ ಭಟ್ ಅಭಿಪ್ರಾಯ ವ್ಯಕ್ತ ಪಡಿಸಿದರು. ವೇ. ಮೂ. ಸೀತಾರಾಮ ಭಟ್ ಮಾತನಾಡಿ ವಿದ್ವಾಂಸರಾದ ಭಾಸ್ಕರ್ ಭಟ್ಟರ ಸಾಮಾಜಿಕ ಸ್ಪಂದನೆ ನಮ್ಮಂತ ವೈದಿಕರಿಗೆ ಆದರ್ಶಪ್ರಾಯವಾದುದು ಎಂದು ನುಡಿದರು.
ಆನೆಗುಡ್ಡೆ ದೇವಳದ ನಿಕಟಪೂರ್ವ ಆಡಳಿತ ಮುಕ್ತೇಸರಾದ ಸೂರ್ಯನಾರಾಯಣ ಉಪಾಧ್ಯಾಯರು ಶುಭ ಹಾರೈಸಿದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ವಿಶ್ವಹಿಂದೂ ಪರಿಷತ್ತಿನ ಪ್ರೇಮಾನಂದ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ.ಕೆ.ಸದಾಶಿವ ರಾವ್ ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯಕರ್ತರಾದ ಯು.ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ್ ಹೆಗ್ಡೆ, ವಿಜಯ ಕುಮಾರ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಎಚ್.ಎನ್.ವೆಂಕಟೇಶ್, ಎ.ಅಜಿತ್ ಕುಮಾರ್, ಪಿ.ದಿನೇಶ ಪೂಜಾರಿ, ಬಿ.ಸಂತೋಷಕುಮಾರ್ ಶೆಟ್ಟಿ, ಗಣೇಶ್ ಬ್ರಹ್ಮಾವರ, ನಿರಂಜನ ಭಟ್, ಗಣಪತಿ ಭಟ್, ನಾಗರಾಜ ಹೆಗಡೆ, ವಿನೋದಾ ಎಂ. ಕಡೆಕಾರ್, ಹಾಗೂ ಸದಸ್ಯರಾದ ಗೋಪಾಲಕೃಷ್ಣ ಕೋಟೇಶ್ವರ, ನರಸಿಂಹಮೂರ್ತಿ,ಶಿವಾನಂದ ಅಡಿಗ, ನಾಗರಾಜ ನಾವಡ, ಮಹಾಬಲೇಶ್ವರ ಭಟ್,ಕಿಶೋರ್ ಉಪಸ್ಥಿತರಿದ್ದರು. ಯಕ್ಷಗಾನ ಕಲಾವಿದರಾದ ಅಣ್ಣಪ್ಪ ಕುಲಾಲ ಸಾಹಿತ್ಯ ಪರಿಷತ್ತಿನ ಸುಬ್ರಮಣ್ಯ ಶೆಟ್ಟಿ ಆಗಮಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಮ್. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿದ 56ನೇ ಮನೆಯಾಗಿದೆ.