ಮಂಗಳೂರು : ಲಕ್ಷ್ಮಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಇದರ ಅಂಗಸಂಸ್ಥೆಯಾದ ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್ ಇದರ ಸಹಯೋಗದೊಂದಿಗೆ ನ.7ರಿಂದ 9ರವರೆಗೆ ನಡೆಯಲಿರುವ ಭಾರತೀಯ ಜೈವಿಕ ವೈದ್ಯಕೀಯ ವಿಜ್ಞಾನಿಗಳ ಸಂಘದ 45ನೇ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭ ಎಜೆ ಮೆಡಿಕಲ್ ಕಾಲೇಜಿನ ಆಡಿಟೋರಿಯಂನಲ್ಲಿ ಗುರುವಾರ ಜರುಗಿತು.
ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮಾಜಿ ಹಿರಿಯ ಸಲಹೆಗಾರ ಡಾ.ಟಿ.ಎಸ್. ರಾವ್ ಅವರು, “ಜೈವಿಕ ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಬಹಳಷ್ಟು ಸವಾಲುಗಳಿವೆ. ಈ ಸವಾಲುಗಳ್ನ್ನು ಮೆಟ್ಟಿನಿಂತು ನಾವು ಕೋವಿಡ್ 19 ಸಂದರ್ಭದಲ್ಲಿ ಸಕಾಲದಲ್ಲಿ ವ್ಯಾಕ್ಸಿನ್ ತಯಾರಿ ಮಾಡುವ ಮೂಲಕ ಗೆಲುವನ್ನು ಸಾಧಿಸಿದ್ದೇವೆ. ನಾವು ಪ್ರತೀಯೊಬ್ಬರು ಇಂತಹ ಅವಕಾಶವನ್ನು ಬಳಸಿಕೊಂಡು ದೇಶ ಹೆಮ್ಮೆ ಪಡುವಂತೆ ಮಾಡಬೇಕು. ಇಂತಹ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ“ ಎಂದು ಶುಭ ಹಾರೈಸಿದರು.
ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇದರ ರಿಜಿಸ್ಟ್ರಾರ್ ಡಾ.ರಿಯಾಜ್ ಭಾಷಾ ಎಸ್. ಮಾತನಾಡಿ, “ಜೈವಿಕ ವೈದ್ಯಕೀಯ ಸಂಘಟನೆ ಸಮಾಜದಲ್ಲಿ ಬಹಳಷ್ಟು ಉತ್ತಮ ಕಾರ್ಯಗಳನ್ನು ಮಾಡುತ್ತ ಬಂದಿದೆ. 2020ರ ಮಾರ್ಚ್ ತಿಂಗಳಲ್ಲಿ ಕೋವಿಡ್ ಆರಂಭವಾದಾಗ ನಮಗೆ ಕೇವಲ 2 ಲ್ಯಾಬ್‌ಗಳು ಮಾತ್ರ ಲಭ್ಯವಿತ್ತು. ನಂತರ ಜುಲೈ 2020ರಲ್ಲಿ 100ಕ್ಕೂ ಹೆಚ್ಚು ಲ್ಯಾಬ್‌ಗಳನ್ನು ವ್ಯವಸ್ಥೆ ಮಾಡಲಾಯಿತು. 2000ಕ್ಕೂ ಹೆಚ್ಚು ಐಸಿಯು ಬೆಡ್ ಸಕಾಲಕ್ಕೆ ಸಿಕ್ಕಿದ್ದು ಈಗ 32000ಕ್ಕೂ ಹೆಚ್ಚು ಐಸಿಯು ಬೆಡ್‌ಗಳ ವ್ಯವಸ್ಥೆಯಿದೆ. ಇದು ನಮ್ಮ ವೈದ್ಯಕೀಯ ಕ್ಷೇತ್ರದ ಸಾಧನೆಯಾಗಿದೆ. ನಾವು ಮಾತಾಡುವ ವಿಷಯವನ್ನು ರೋಗಿಗಳಿಗೆ ಅರ್ಥವಾಗುವಂತೆ ಹೇಳಬೇಕು. ಇದರಿಂದ ಅವರ ಮತ್ತು ನಮ್ಮ ಮಧ್ಯೆ ಸಂವಹನ ಸಾಧ್ಯವಾಗುತ್ತದೆ. ರೋಗಿಗಳಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಅವರು ಸೂಕ್ತ ಸಮಯದಲ್ಲಿ ಸರಿಯಾದ ಔಷಧಿ ತೆಗೆದುಕೊಳ್ಳಲು ಆರೋಗ್ಯ ಕಾಪಾಡಲು ವೈದ್ಯರುಗಳು ಸಹಕರಿಸಬೇಕು” ಎಂದರು.
ಭಾರತೀಯ ಜೈವಿಕ ವೈದ್ಯಕೀಯ ಸಂಘಟನೆ ಅಧ್ಯಕ್ಷೆ ಡಾ.ಪದ್ಮಿನಿ ಇ. ಮಾತನಾಡಿ, “ಕ್ಯಾನ್ಸರ್ ಸೋಂಕಿತರು ಇಂದು ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅವರಿಗೆ ದೀರ್ಘ ಕಾಲದ ಚಿಕಿತ್ಸೆ ಅಗತ್ಯವಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಅವರನ್ನು ಮಾನಸಿಕವಾಗಿ ತಯಾರು ಮಾಡುವ ಕೆಲಸವನ್ನು ವೈದ್ಯರು ಮಾಡಬೇಕು. ಭಾರತೀಯ ವೈದ್ಯಕೀಯ ಕ್ಷೇತದಲ್ಲಿ ಬಹಳಷ್ಟು ಸವಾಲುಗಳಿವೆ. ರೀಸರ್ಚ್ ಎಜುಕೇಷನ್ ಮತ್ತು ಸಮೂಹ ಸಂವಹನದಿಂದ ನಾವು ಪ್ರಗತಿಯನ್ನು ಪಡೆಯಲು ಸಾಧ್ಯ“ ಎಂದು ಅಭಿಪ್ರಾಯಪಟ್ಟರು.
ಎಜೆ ಆಸ್ಪತ್ರೆ ಡೀನ್ ಡಾ.ಅಶೋಕ್ ಹೆಗ್ಡೆ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಸಂಘಟನೆಯ ಕೋಶಾಧಿಕಾರಿ ಡಾ. ಜಿ. ಕುಲಂದೈವೆಲ್, ಸಂಘಟನೆ ಪ್ರಧಾನ ಕಾರ್ಯದರ್ಶಿ ಡಾ. ಹೇಮಮಾಲಿನಿ, ಡಾ. ಸುಶೀಲ್, ಡಾ. ಮಂಜುಳಾ ಶಾಂತಾರಾಮ್, ಡಾ. ಸುಭ್ರತಾ ಘೋಷ್, ಡಾ. ಗೌತಮ್ ಮತ್ತಿತರರು ಉಪಸ್ಥಿತರಿದ್ದರು.
ಶ್ರಾವಣಿ ಸ್ನೇಹ ದೇವರನ್ನು ಸ್ತುತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಮಂಜುಳಾ ಶಾಂತಾರಾಮ್ ಧನ್ಯವಾದ ಸಮರ್ಪಿಸಿದರು.