ಉಡುಪಿ : ಉಡುಪಿ ಜಿಲ್ಲೆಯ ಇನ್ನಾ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ 400 ಕೆ ವಿ ವಿದ್ಯುತ್ ಪವರ್ ಲೈನ್ ಸಮಸ್ಯೆಯು ಇಂದು ಬೆಳಗಾವಿ ಅಧಿವೇಶನದಲ್ಲಿ ಪ್ರತಿಧ್ವನಿಸಿತು.
ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಮಂಜುನಾಥ ಭಂಡಾರಿ ಅವರು ನಂದಿಕೂರು ಕಾಸರಗೋಡು ವಿದ್ಯುತ್ ಲೈನ್ ಕಾಮಗಾರಿಯ ಅವೈಜ್ಞಾನಿಕ ಯೋಜನೆ ಕುರಿತಂತೆ ಹಾಗೂ ಇದರಿಂದ ರೈತರಿಗೆ ಆಗುವ ಅನಾನುಕೂಲವನ್ನು ವಿವರಿಸಿದರು.
ಕೂಡಲೇ ಟವರ್ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ವೈಜ್ಞಾನಿಕವಾಗಿ ನೆಲದಡಿಯಲ್ಲಿ ವಿದ್ಯುತ್ ಲೈನ್ ನಿರ್ಮಾಣ ಮಾಡುವ ಕುರಿತಂತೆ ಶೂನ್ಯ ವೇಳೆಯಲ್ಲಿ ಇಂಧನ ಸಚಿವರನ್ನು ಒತ್ತಾಯಿಸಿದರು. ಈ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಅಹೋರಾತ್ರಿ ಹೋರಾಟ ನಡೆದಿತ್ತು. ಸ್ಥಳೀಯ ರೈತರು ಕೂಡ ಯೋಜನೆ ವಿರುದ್ಧ ಧರಣಿ ನಡೆಸುತ್ತಿದ್ದಾರೆ. ಈ ಯೋಜನೆ ವಿರುದ್ಧ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ದನಿ ಎತ್ತಿರುವುದರಿಂದ ಹೋರಾಟಗಾರರಿಗೆ ಮತ್ತಷ್ಟು ಬಲ ಬಂದಂತಾಗಿದೆ.