ಚಾರ್ಮಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿ ದ್ವಿಪಥಗೊಳಿಸಲು 343.74 ಕೋಟಿ ರೂ. ಅನುದಾನ ಬಿಡುಗಡೆ : ಸಂಸದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು : ಚಾರ್ಮಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 343.74 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಮಂಗಳೂರಿನಿಂದ ಮೂಡಿಗೆರೆಯಾಗಿ ತುಮಕೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟಿಯಲ್ಲಿ 75 ಕಿ.ಮೀ ನಿಂದ 86.20 ಕಿ.ಮೀ. ಅಂತರದವರೆಗೆ ಅಭಿವೃದ್ದಿಯಾಗಲಿದೆ. ಆ ಮೂಲಕ ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಯು ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ. ಈ ಹೆದ್ದಾರಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ ಎಂದು ಸಂಸದರು ಹೇಳಿದ್ದಾರೆ.

ರಾಜ್ಯದ ಪ್ರಮುಖ ಹೆದ್ದಾರಿಯಾದ ಚಾರ್ಮಾಡಿ ಘಾಟ್‌ನ್ನು ಮೇಲ್ದರ್ಜೆಗೇರಿಸುವುದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಸುಗಮ ಸರಕು ಸಾಗಾಣೆಯೊಂದಿಗೆ ಈ ಭಾಗದ ವ್ಯಾಪಾರ-ವಹಿವಾಟು ಕೂಡ ವೃದ್ಧಿಸಲಿದೆ. ಆ ಮೂಲಕ, ಕರ್ನಾಟಕದ ವಾಣಿಜ್ಯ ಹೆಬ್ಬಾಗಿಲು ಎಂದು ಗುರುತಿಸಿಕೊಂಡಿರುವ ಕರಾವಳಿ ಮತ್ತಷ್ಟು ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ ಎಂದರು. ಹೀಗಾಗಿ, ಚಾರ್ಮಾಡಿ ಘಾಟ್‌ ಹೆದ್ದಾರಿ ದ್ವಿಪಥಗೊಳಿಸಲು 343,74,00,000 ರೂ. ಬಿಡುಗಡೆಗೊಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಾಗೂ ಇಲಾಖೆ ಅಧಿಕಾರಿಗಳಿಗೆ ಜಿಲ್ಲೆಯ ಜನತೆ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಕ್ಯಾ. ಚೌಟ ಹೇಳಿದ್ದಾರೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ