ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ ಸಂಸ್ಥೆಗೆ 2.5 ಕೋಟಿ ವಂಚನೆ ಪ್ರಕರಣ; ಆರೋಪಿಗೆ ಮಂಜೂರು ಮಾಡಿದ್ದ ಜಾಮೀನು ರದ್ದು!

ಕುಂದಾಪುರ : ಅನಿವಾಸಿ ಭಾರತೀಯ, ಕುಂದಾಪುರ ಮೂಲದ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಡಳಿತ ನಿರ್ದೇಶಕರಾಗಿರುವ ದುಬೈನ ಹೋಟೆಲೊಂದಕ್ಕೆ ಅಕೌಂಟೆಂಟ್ ಆಗಿ ಸೇರಿ ಹಂತಹಂತವಾಗಿ 2.5 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಾರ್ಕೂರು‌ ಮೂಲದ ನಾಗೇಶ್ ಪೂಜಾರಿ (31) ಎಂಬಾತನಿಗೆ ಬ್ರಹ್ಮಾವರ ಜೆ.ಎಂ.ಎಫ್.ಸಿ. ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ರದ್ಧುಗೊಳಿಸಿ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ಮಹತ್ವದ ಆದೇಶ ನೀಡಿದ್ದಾರೆ.

ಪ್ರಕರಣದ ವಿವರ : ದುಬೈನ ಫಾರ್ಚ್ಯೂನ್ ಗ್ರೂಫ್ ಆಫ್ ಹೋಟೆಲ್ಸ್ ಸಂಬಂಧಿತ ಹೋಟೆಲೊಂದಕ್ಕೆ ಉದ್ಯೋಗಕ್ಕೆ ಸೇರಿದ್ದ ನಾಗೇಶ್ ಪೂಜಾರಿಯು 2.5ಕೋಟಿಗೂ ಅಧಿಕ ಹಣ ವಂಚಿಸಿದ್ದು ಈ ಬಗ್ಗೆ ಫಾರ್ಚ್ಯೂನ್ ಹೋಟೆಲ್ ಮ್ಯಾನೇಜರ್ ಸುನೀಲ್ ಕುಮಾರ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 25 ಲಕ್ಷಕ್ಕೂ ಹೆಚ್ಚಿನ ಹಣ ಅವ್ಯವಹಾರ ಪ್ರಕರಣಗಳ ತನಿಖೆ ಸೆನ್ ಠಾಣೆಗೆ ಬರುವ ಕಾರಣ ಈ ಪ್ರಕರಣ ಉಡುಪಿ ಸೆನ್ ಠಾಣೆಗೆ ವರ್ಗಾವಣೆಗೊಂಡಿತ್ತು. ಆರೋಪಿ ನಾಗೇಶ್ ಪೂಜಾರಿ ಉಚ್ಚ ನ್ಯಾಯಾಲಯ (ಹೈಕೋರ್ಟ್)ದಲ್ಲಿ ಎಫ್.ಐ.ಆರ್. ಮೇಲಿನ ತನಿಖೆ ಸ್ಥಗಿತಗೊಳಿಸಲು ವಕೀಲರ ಮೂಲಕ ಅರ್ಜಿ ದಾಖಲಿಸಿದ್ದು 2023 ಜುಲೈನಲ್ಲಿ ಆ ಅರ್ಜಿ ವಜಾಗೊಳಿಸಲಾಗಿತ್ತು. ಬಳಿಕ ಆರೋಪಿ ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಕರ್ನಾಟಕ ಉಚ್ಚನ್ಯಾಯಾಲಯದ ಮತ್ತು ಸೆಶನ್ಸ್ ನ್ಯಾಯಾಲಯದ ಆದೇಶಗಳನ್ನು ಮರೆಮಾಚಿ ಬ್ರಹ್ಮಾವರದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಶರಣಾಗಿ 2023 ಆಗಸ್ಟ್ ತಿಂಗಳಿನಲ್ಲಿ ಆರೋಪಿ ಜಾಮೀನು ಪಡೆದುಕೊಂಡಿದ್ದ.

ಈ ಜಾಮೀನು ಆದೇಶವನ್ನು ಸರಕಾರ ಪ್ರಶ್ನಿಸಿ ಪರಿಷ್ಕೃತ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆಯ‌ನ್ನು ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಕೈಗೊಂಡಿದ್ದು, 2.5ಕೋಟಿಗೂ ಅಧಿಕ ಹಣ ಅವ್ಯವಹಾರ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿರುವುದು ಸಮಂಜಸವಲ್ಲ. ಹಾಗೂ ಹೈಕೋರ್ಟ್ ಮತ್ತು ಸೆಶನ್ಸ್ ಕೋರ್ಟ್‌ನಲ್ಲಿರುವ ನ್ಯಾಯಾಲಯದ ಆದೇಶಗಳನ್ನು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಹಾಜರುಪಡಿಸದೆ ಜಾಮೀನು ಪಡೆದಿರುವುದು ಸರಿಯಲ್ಲ, ಈ ಜಾಮೀನು ರದ್ದುಪಡಿಸಬೇಕೆಂದು ಸರಕಾರ ಕೋರಿಕೊಂಡಿದ್ದು ವಾದ-ಪ್ರತಿವಾದ ಆಲಿಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ಜೆ.ಎಂ.ಎಫ್.ಸಿ ನ್ಯಾಯಾಲಯ ನೀಡಿದ ಜಾಮೀನು ರದ್ದುಗೊಳಿಸಿ ಆದೇಶ ನೀಡಿದ್ದಾರೆ.

ಸರಕಾರದ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದ ಮಂಡಿಸಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !