2018ರಲ್ಲಿ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ವ್ಯಕ್ತಿಯ ಆಶ್ರಿತರಿಗೆ 1.35 ಕೋ.ರೂ. ಪರಿಹಾರ ನೀಡುವಂತೆ ನ್ಯಾಯಾಲಯ ತೀರ್ಪು

ಮಂಗಳೂರು : 2018‌ರಲ್ಲಿ ಕೊಟ್ಟಾರ ಚೌಕಿ ಬಳಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಆಶ್ರಿತರಿಗೆ 1.35 ಕೋ.ರೂ. ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ ಆದೇಶಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್‌ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆ ಲಕ್ಷ್ಮೀ ಜಿ.ಎಂ. ತೀರ್ಪು ನೀಡಿದ್ದಾರೆ.

ಪಣಂಬೂರಿನ ಎಂಸಿಎಫ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಹೇಶ್‌ ಭಟ್‌ 2018ರ ಮೇ 18ರಂದು ತನ್ನ ಬೈಕ್‌ನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಕೊಟ್ಟಾರಚೌಕಿ ಬಳಿ ರಾಜಸ್ಥಾನ ನೋಂದಣಿಯ ಲಾರಿ ಢಿಕ್ಕಿ ಹೊಡೆದು ಮೃತಪಟ್ಟಿದ್ದರು.

ಒಂದನೇ ಹೆಚ್ಚುವರಿ ಸೀನಿಯರ್‌ ಸಿವಿಲ್‌ ಜಡ್ಜ್ ನ್ಯಾಯಾಲಯದಲ್ಲಿ ಮೋಟಾರು ವಾಹನ ಅಪಘಾತ ಪರಿಹಾರ ಕಾಯ್ದೆಯಡಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಎದುರುವಾದಿ ವಿಮಾ ಕಂಪೆನಿಯ ನ್ಯಾಯವಾದಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಹಳಷ್ಟು ವಾದಗಳನ್ನು ಮಾಡಿದ್ದರು. ಕೊನೆಗೆ ನ್ಯಾಯಾಲಯವು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳು ಹಾಗೂ ಮಂಡಿಸಿದ ವಾದ ಪ್ರತಿವಾದಗಳನ್ನು ಪರಿಗಣಿಸಿ ಪರಿಹಾರ ಧನ ಪಡೆಯಲು ಮೃತರ ಪತ್ನಿ ಮತ್ತು ಪುತ್ರ ಹಾಗೂ ಹೆತ್ತವರು ಅರ್ಹರಾಗಿದ್ದಾರೆ ಎಂದು ತೀರ್ಮಾನಿಸಿತು.

1 ಕೋಟಿ 6 ಲಕ್ಷ ರೂ. ಪರಿಹಾರವನ್ನು 2018ರಿಂದ 24ರ ವರೆಗಿನ ಶೇ. 6ರಷ್ಟು ಬಡ್ಡಿಯೊಂದಿಗೆ ಸೇರಿಸಿ ಒಟ್ಟು 1.35 ಕೋ.ರೂ. ಗಳನ್ನು ಅರ್ಜಿದಾರರಿಗೆ ನೀಡಬೇಕು ಎಂದು ಆದೇಶಿಸಿತು.

ಅರ್ಜಿದಾರರ ಪರವಾಗಿ ಮಂಗಳೂರಿನ ವಕೀಲರಾದ ಎ. ದಿನೇಶ್‌ ಭಂಡಾರಿ, ಕೆ.ಎಸ್‌.ಎನ್‌. ಅಡಿಗ, ಪ್ರೀತಿಕಾ ಕೆ.ಎಂ. ಹಾಗೂ ತೃಪ್ತಿ ವಾದಿಸಿದ್ದರು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ