ಉಡುಪಿ : ಯಕ್ಷಗಾನ, ಕಲೆಯ ಎಲ್ಲಾ ಅಂಗಗಳನ್ನು ಪರಿಪೂರ್ಣ ಕಲಾ ಪ್ರಕಾರ. ಅದನ್ನು ಪ್ರಸ್ತುತ ಪಡಿಸುವ ಕಲಾವಿದರು ಸಮಾಜಕ್ಕೆ ಪುರಾಣದ ಸಂದೇಶವನ್ನು ತಿಳಿಸುವ ಶ್ರೇಷ್ಠ ವಿದ್ವಾಂಸರು. ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕೆಲಸ ಅನನ್ಯ ಮತ್ತು ಅಗಾಧ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದ್ದಾರೆ.
ಮೇ 31ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗ ಆಯೋಜಿಸಿದ 25ನೇ ವರ್ಷದ ಯಕ್ಷಗಾನ ಕಲಾವಿದರ ಸಮಾವೇಶದಲ್ಲಿ ಅನುಗ್ರಹ ಸಂದೇಶ ನೀಡಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರೂ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಯೋಜಿತ ಅಧ್ಯಕ್ಷರಾಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಸ್ವಾಮೀಜಿ ಸ್ಮರಣಿಕೆ, ಶಾಲು, ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಕಲಾವಿದರಾದ ಸುಬ್ರಹ್ಮಣ್ಯ ಬೈಪಾಡಿತ್ತಾಯರು ಬರೆದ ‘ಆಗಸದ ಬೆಳಕು’ ಪುಸ್ತಕವನ್ನು ಅವರು ಲೋಕಾರ್ಪಣೆಗೊಳಿಸಿದರು. ಇತ್ತೀಚೆಗೆ ನಿಧನರಾದ ಪುತ್ತೂರು ಗಂಗಾಧರ ಜೋಗಿ ಅವರ ಧರ್ಮಪತ್ನಿಗೆ ಸಾಂತ್ವನ ನಿಧಿಯನ್ನು ನೀಡಲಾಯಿತು. ಅಲ್ಲದೇ 21 ಮಂದಿ ಯಕ್ಷಗಾನ ಕಲಾವಿದರಿಗೆ ತಲಾ ಹತ್ತು ಸಾವಿರದಂತೆ ಗೃಹ ನಿರ್ಮಾಣದ ಉಡುಗೊರೆ ಹಾಗೂ 7 ಮಂದಿ ಕಲಾವಿದರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.