ಸರಕಾರದ ಅತೀಯಾದ ಹಸ್ತಕ್ಷೇಪ, ಕಾನೂನು ಪಾಲನೆ ಪೊಲೀಸರಿಗೆ ಅಸಾಧ್ಯವಾದ ಸ್ಥಿತಿ : ಶಾಸಕ ಭರತ್ ಶೆಟ್ಟಿ

ಮಂಗಳೂರು : ರಸ್ತೆಯಲ್ಲಿಯೇ ನಮಾಜ್ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದವರ ಮೇಲೆ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸದೆಯೇ ಬಿ ರಿಪೋರ್ಟ್ ಸಲ್ಲಿಸುವ ಮೂಲಕ ಕಾಂಗ್ರೆಸ್ ಸರಕಾರ ಸಮಾಜದ ಸಾಮರಸ್ಯ ಕೆಡಿಸಲು ವಿಷ ಬೀಜ ಹಾಕಿದೆ. ಮುಂದೆ ರಸ್ತೆಯಲ್ಲಿಯೇ ನಮಾಜ್ ಮಾಡುವುದು ಚಾಳಿಯಾಗಲಿದೆ. ಇತರರು ಕೂಡ ಯಾವುದೇ ಪರವಾನಿಗೆ ಪಡೆಯದೇ ರಸ್ತೆಯಲ್ಲಿಯೇ ಪ್ರಾರ್ಥನೆ, ಇತರ ಕಾರ್ಯಕ್ರಮ ನಡೆಸಲು ಆಸ್ಪದ ನೀಡಲು ಈ ಪ್ರಕರಣ ಪ್ರೇರಣೆಯಾಗಲಿದೆ. ಸಾಮರಸ್ಯವನ್ನು ಗುತ್ತಿಗೆ ತೆಗೆದುಕೊಂಡಂತೆ ಮಾತನಾಡುವ ಕಾಂಗ್ರೆಸ್ಸಿಗರೇ ಇಂತಹ ಅವ್ಯವಸ್ಥೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ವೈ.ಭರತ್ ಶೆಟ್ಟಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತುಷ್ಟೀಕರಣವನ್ನು ಮಾಡುತ್ತಲೇ ಬಂದಿದೆ. ಜನನಿಬಿಢ, ವಾಹನ ದಟ್ಟಣೆ ಇರುವ ಸ್ಥಳದಲ್ಲಿ ನಮಾಜ್ ಮಾಡುವುದು ಸರಿಯಾ? ಎಂದು ಪ್ರಶ್ನಿಸಿದರೆ, ಯಕ್ಷಗಾನ ಬೇರೆ ಕಾರ್ಯಕ್ರಮ ಮಾಡುತ್ತೀರಿ ಎನ್ನುತ್ತಾರೆ. ಅದಕ್ಕೆಲ್ಲ ಪರ್ಮಿಷನ್ ತೆಗೆದುಕೊಳ್ಳಲಾಗುತ್ತದೆ. ವರ್ಷಕ್ಕೊಮ್ಮೆ ಎಲ್ಲ ಮತದವರ ಹಬ್ಬ ಆಗುತ್ತದೆ. ಪರವಾನಿಗೆ ಪಡೆದು ಮಾಡಲಾಗುತ್ತದೆ. ಅದು ಬೇರೆ ವಿಷಯ. ಏಕಾಏಕಿ ರಸ್ತೆಗೆ ಬಂದು ನಮಾಜ್ ಮಾಡುವುದು ಸರಿಯಾ, ಸ್ವಯಂ ಪ್ರೇರಿತ ಕೇಸ್ ವಾಪಸ್ ತೆಗೆದು ಕೇಸ್ ಹಾಕಿದ ಅಧಿಕಾರಿಯನ್ನು ರಜೆ ಮೇಲೆ ಕಳುಹಿಸಿದ್ದು ಸರಿಯಾ, ಯಾವುದೇ ತನಿಖೆ ನಡೆಸದ ಬಿ-ರಿಪೋರ್ಟ್ ಹಾಕಿರುವುದು ಸರಿಯಾ. ಇದು ರಾಜಕೀಯ ಒತ್ತಡದಿಂದ ಆಗಿದೆ. ಎಲ್ಲಿ ಏನು ಎಂಬ ತನಿಖೆ ಆಗಿಲ್ಲ. ಮಹಜರು ಆಗಿಲ್ಲ. ವೀಡಿಯೋ ಫೊರೆನ್ಸಿಕ್‌ಗೆ ಕಳುಹಿಸಿಲ್ಲ. ತುಷ್ಟೀಕರಣ ನೀತಿಯ ಪರಮಾವಧಿ ತಲುಪಿದೆ. ಇದನ್ನೆಲ್ಲ ಮಾಡಿದರೆ ನಮಾಜ್ ಮಾಡಿದವರ ಓಟು ಬೀಳತ್ತದೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಪ್ರಶ್ನೆ ಮಾಡಿದರೆ ಕೇಸು ಹಾಕುತ್ತಾರೆ. ವಿ‌ಎಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮೇಲೆ ಕೇಸ್ ಹಾಕಿದ್ದಾರೆ. ಹಾಗಾದರೆ ಬಾಯಿ ಮುಚ್ಚಿ ನೋಡಬೇಕಾ, ಕೇಳಬೇಕಾ ಎಂದು ಪ್ರಶ್ನಿಸಿದರು.

ನಾಳೆ ಬೇರೆ ಯಾರಾದರೂ ರಸ್ತೆಗೆ ಬಂದು ಪ್ರಾರ್ಥನೆ ಮಾಡುತ್ತಾರೆ. ಈ ರೀತಿಯ ವ್ಯವಸ್ಥೆಯ ಅವಕಾಶ ಯಾಕೆ ಮಾಡಿಕೊಡಬೇಕು. ಈ ಅವ್ಯವಸ್ಥೆಯಿಂದ ಬೇರೆಯವರಿಗೂ ಆಸ್ಪದ ನೀಡಿದಂತಾಗಿದೆ. ಪೊಲೀಸ್ ಠಾಣೆಗೆ ಹೋಗಿ ಅನುಮತಿ ಪಡೆಯಬೇಕಾಗಿಲ್ಲ ಎಂಬ ಮನಸ್ಥಿತಿ ಬರುತ್ತದೆ. ಎಲ್ಲರಿಗೂ ಬಿಟ್ಟು ಬಿಡಲಿ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ವೈಫಲ್ಯದತ್ತಾ ಸಾಗಿದೆ. ಕಾನೂನು ಮೀರಿ ನಡೆದರೂ ಮೌನ ವಹಿಸುವ ಈ ಸರಕಾರ, ಪೊಲೀಸರು ಹಾಕಿದ ಕೇಸ್ ತೆಗೆದು ಹಸ್ತಕ್ಷೇಪ ಮಾಡಿ, ಬಿ ರಿಪೋರ್ಟ್ ಹಾಕುವಂತೆ ಮಾಡಿದ್ದಾರೆ. ಎಂಎಲ್‌ಎಗಳ ಮೇಲೆ ಕೇಸ್ ಹಾಕುವುದು ಸಾಮಾನ್ಯ ಆಗಿದೆ. ಯಾರೂ ಪ್ರಶ್ನೆ ಮಾಡಬಾರದು ಎಂಬ ಮನಸ್ಥಿತಿ ಸರಕಾರದ್ದು. ಶರಣ್ ಪಂಪ್‌ವೆಲ್ ವಿರುದ್ದ ಕೇಸು ದಾಖಲಿಸಿ ಸರಕಾರ ಪೌರುಷ ಮೆರೆದಿದೆ. ಸಾಮಾಜಿಕ ಜಾಲತಾಣದಲ್ಲಿನ ಅವರ ಹೇಳಿಕೆಯನ್ನು ಸಮರ್ಥಿಸುತ್ತೇನೆ. ಸಿಎಂ, ಗೃಹ ಸಚಿವರು, ಅಧಿಕಾರಿಗಳು ರಾಜಕೀಯ ಓಟ್ ಬ್ಯಾಂಕ್ ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ, ನಿಯಮದಂತೆ ಕೆಲಸ ಮಾಡುತ್ತಿಲ್ಲ ಡಾ. ಭರತ್ ಶೆಟ್ಟಿ ವೈ ಟೀಕಿಸಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !