ಮುಂಬೈ ಪೊಲೀಸರ ಸೋಗಿನಲ್ಲಿ ಉಡುಪಿಯ ಮಹಿಳೆಗೆ 11 ಲಕ್ಷ ರೂ. ಪಂಗನಾಮ

ಉಡುಪಿ : ಮುಂಬೈ ಪೊಲೀಸರ ಸೋಗಿನಲ್ಲಿ ಬ್ರಹ್ಮಾವರದ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರದ ವಿದ್ಯಾ(43) ಹಣ ಕಳೆದುಕೊಂಡಿರುವ ಮಹಿಳೆ. ಅಪರಿಚಿತ ವ್ಯಕ್ತಿಯೊಬ್ಬರು ಮೇ 28ರಂದು ವಿದ್ಯಾ ಎಂಬ ಮಹಿಳೆಯ ಮೊಬೈಲ್‌ಗೆ ಕರೆ ಮಾಡಿ ತಮ್ಮ ವಿರುದ್ಧ ಅಕ್ರಮ ಜಾಹೀರಾತು ಮತ್ತು ಕಿರುಕುಳ ಸಂದೇಶಗಳಿಗೆ ಸಂಬಂಧಿಸಿದಂತೆ 17 ದೂರುಗಳನ್ನು ದಾಖಲಿಸಲಾಗಿದೆ. ಈ ಬಗ್ಗೆ ಸೈಬರ್ ಅಪರಾಧ ಶಾಖೆ ಮುಂಬೈ ಹಾಟ್‌ಲೈನ್‌ಗೆ ಸಂಪರ್ಕಿಸಿರುವುದಾಗಿ ತಿಳಿಸಿದ್ದನು.

ನಂತರ ವಿನಾಯಕ ಬಾಬರ್ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ತಾನು ಮುಂಬೈ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಎಂದು ನಂಬಿಸಿ ವಿದ್ಯಾ ವಿರುದ್ಧ ಮನಿಲಾಂಡರಿಂಗ್ ಕೇಸ್ ಕೂಡ ದಾಖಲಾಗಿದೆ ಎಂದು ವಾಟ್ಸಾಪ್‌ನಲ್ಲಿ ಅರೆಸ್ಟ್ ವಾರೆಂಟ್ ಪ್ರತಿ ಕಳುಹಿಸಿದ್ದನು. ತನಿಖೆಗೆ ಸಹಕರಿಸಿದರೆ ಪ್ರಕರಣದಿಂದ ಹೊರ ಬರುವಂತೆ ತಮಗೆ ಸಹಾಯ ಮಾಡುವುದಾಗಿ ಹೇಳಿದ್ದನು.

ಇದರಿಂದ ಗಾಬರಿಗೊಂಡ ವಿದ್ಯಾ ಉಳಿತಾಯದ ಹಣ, ಚಿನ್ನವನ್ನು ಅಡವಿಟ್ಟ ಹಣ ಹಾಗೂ ಇತರರಿಂದ ಸಾಲ ಪಡೆದ ಹಣವನ್ನು ಆರೋಪಿ ತಿಳಿಸಿದ ಖಾತೆಗಳಿಗೆ ಒಟ್ಟು 11,04,263ರೂ. ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ.

ಹೀಗೆ ಮುಂಬೈ ಪೊಲೀಸರ ಹೆಸರಿನಲ್ಲಿ ಮೋಸ ಹೋಗಿರುವ ವಿದ್ಯಾ ಆರೋಪಿಯ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು